Monday, 3 October 2011

"ನಿನ್ನೆ ನೀವು ಎನ್ಮಾಡಿದ್ರಿ?"

      ಇವತ್ತು ಪಾಠ ಕೊಂಚ ಬೇಗನೆ ಮುಗಿದಿತ್ತು ..... ಹಾಜರಿ ಹಾಕಿದ ನಂತರ ನಮ್ಮ ಅಧ್ಯಾಪಕರು ಹೀಗಂತ  ಕೇಳಿದರು :

                                "ನಿನ್ನೆ ನೀವು ಎನ್ಮಾಡಿದ್ರಿ?"

       ತರಹಾವೇರಿ ಉತ್ತರಗಳು ಬಂದವು 
        - ನಿನ್ನೆ ಭಾನುವಾರವಾದ್ದರಿಂದ ನಿದ್ದೆ ಮಾಡಿದೆ .
        -ಆಚೆ ಹೋಗಿದ್ದ್ದೆ .
        - ಸಿನಿಮಾ ನೋಡಿದೆ .. ಇತ್ಯಾದಿ ಇತ್ಯಾದಿ ......
      'ನಿನ್ನೆ ತಾರೀಕೆಷ್ಟು ?' ಎಂದರು ಅಧ್ಯಾಪಕರು ... 
      'ಅಕ್ಟೋಬರ್ ೨ ' ಎಂದೆವು .
     ಆ ಕ್ಷಣಕ್ಕೇ ಬಹುತೇಕರಿಗೆ ನೆನಪಾಗಿದ್ದು ನಿನ್ನೆ ಗಾಂಧಿ ಜಯಂತಿ ಅಂತ. ನಮ್ಮಂತಹ ವೃತ್ತಿ ಪರ ಕಾಲೇಜು ಗಳಲ್ಲಿ ಇಂತಹ ಸಮಾರಂಭಗಳಿಗೆ ಕರೆದರೂನು ಬರುವ ವಿದ್ಯಾರ್ಥಿಗಳು  ತುಂಬಾ ಕಡಿಮೆ ! ಗಾಂಧಿ ಜಯಂತಿ ಎಂದರೆ ನಮಗೊಂದು ರಜಾ ದಿನ ದಿನ ಮಾತ್ರ! ಈ ಬಾರಿ ಗಾಂಧಿ ಜಯಂತಿ ಭಾನುವಾರ ಬಂದಿದ್ದರಿಂದ ಅದು ಕೂಡ ಜ್ಞಾಪಕವಿರಲಿಲ್ಲ. 
     ' ಗಾಂಧಿ ಜಯಂತಿಯನ್ನು ಯಾರು ಯಾರು ಹೇಗೆ ಹೇಗೆ ಆಚರಿಸಿದಿರಿ' ಎಂದರು .
     ' ................. '
   ಮುಖ ಕೆಳಗೆ ಹಾಕಿ ಕೂತೆವು . ಒಬ್ಬರಿಂದಲೂ ಉತ್ತರವಿಲ್ಲ !  
      'ಒಬ್ಬರೂ ಇಲ್ಲ್ಲವೇ? ' 
      ' ..................' 
     'ಯಾಕೆ  ?'
     ' ..................'
     'ಹೋಗಲಿ ಎಷ್ಟು ಜನರಿಗೆ ಈ ಬಗ್ಗೆ  ನೆನಪಿತ್ತು? ಪ್ರಾಮಾಣಿಕವಾಗಿ  ಹೇಳಿ' ಅಂದರು .
     ಮೇಲೆ ಎದ್ದಿದ್ದು ಬೆರಳೆಣಿಕೆಯ ಕೈ ಗಳು ಮಾತ್ರ .(ನೂರು ಜನರಿರುವ ತರಗತಿ ನಮ್ಮದು ). ನಮ್ಮ ಅಧ್ಯಾಪಕರ ಮುಖದಲ್ಲಿ ಬೇಸರದ ಭಾವ ಇಣುಕಿತು .
    'ಪಾಪ , ಇದನ್ನೆಲ್ಲಾ ನೆನಪಿಟ್ಟುಕೊಳ್ಳಲು ನಿಮಗೆ ಸಮಯವಾದರೂ ಎಲ್ಲಿ?!'
     ಎಲ್ಲರ ಮುಖದಲ್ಲೂ ಒಂಥರ ಅಪರಾಧಿ ಭಾವ .
   'ಹೋಗಲಿ ,ಕ್ಲಾಸ್ ಬಿಡಲು ಇನ್ನು ಸಮಯ ಇದೆ  ಗಾಂಧೀಜಿ ಅವರ ಬಗ್ಗೆ ನಿಮಗೇನು ಗೊತ್ತು ಹೇಳಿ ನೋಡೋಣ '.
    ಗಾಂಧಿಜಿಯವರ ಬಗ್ಗೆ ಶಾಲಾ ದಿನಗಳಲ್ಲಿ ಓದಿದ್ದನ್ನು ನೆನಪಿನ ಪುಟಗಳಿಂದ ಹೆಕ್ಕಿ ಹೆಕ್ಕಿ ಒಬ್ಬೊಬ್ಬರಾಗಿ ಹೇಳತೊಡಗಿದೆವು.. ಸದ್ಯ ಇಷ್ಟಾದರೂ ಗೊತ್ತಲ್ಲ ಇವರಿಗೆ ಎಂಬತ್ತಿತ್ತು ನಮ್ಮ ಗುರುಗಳ ಮುಖಭಾವ !
    'ನಮ್ಮ ದೇಶಕ್ಕೆ   ಸ್ವಾತಂತ್ರ್ಯ ತಂದು  ಕೊಟ್ಟವರು ಕೊಟ್ಟವರು ಗಾಂಧೀಜಿ . ನೀವೆಲ್ಲ ದೊಡ್ಡದಾಗಿ ಅವರ ಫೋಟೋಗೆ ಹಾರ ಹಾಕಿ ಭಾಷಣ ಮಾಡಿ ಅವರ ಜಯಂತಿಯನ್ನು ಆಚರಿಸಬೇಕು ಅಂತ ನಾ ಹೇಳ್ತಾ ಇಲ್ಲ . ಆದರೆ , ದೇಶದ ನವ ನಾಗರೀಕರು ನೀವು , ಕನಿಷ್ಠ ನೆನಪೂ ಇಲ್ಲದೆ ಹೋದರೆ ಹೇಗೆ ? ಇನ್ನು ಮೇಲಾದರೂ ಅವರ ಸರಳತೆ , ಶಿಸ್ತಿನಂತಹ ಕೆಲವು ಮೌಲ್ಯ ಗಳನ್ನು  ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದು ಅವರಿಗೆ ಸಲ್ಲಿಸುವ ನಿಜವಾದ ಗೌರವ.' ಅಂತ ಹೇಳಿ ಹೊರಟರು  ನಮ್ಮ ಗುರುಗಳು .